ಸಂಕ್ರಮಣ 2

	ರಾಶಿಚಕ್ರವನ್ನು (ಝೋಡಿಯಕ್) ವ್ಯಾಖ್ಯಿಸುವ ದ್ವಾದಶ ರಾಶಿಗಳ ಪೈಕಿ ಯಾವುದೇ ಒಂದನ್ನು ಸೂರ್ಯ ಪ್ರವೇಶಿಸುವ ಕ್ಷಣ. ಸಂಕ್ರಾಂತಿ (ನೋಡಿ- ಸಂಕ್ರಾಂತಿ) ಪರ್ಯಾಯ ನಾಮ. ರಾಶಿಚಕ್ರವಾಗಲೀ ಸೌರಚಲನೆ ಯಾಗಲೀ ವಾಸ್ತವವಲ್ಲ-ಭೂನಿವಾಸಿಯಾಗಿರುವ ಮಾನವನಿಗೆ ಭಾಸವಾಗುವ ದೃಶ್ಯಗಳವು. ಹೇಗೂ ಇರಲಿ. ಖಗೋಳವೈಜ್ಞಾನಿಕಗಣನೆ ಗಳಿಗೆ ಅವು ಭದ್ರ ಚೌಕಟ್ಟನ್ನು ಒದಗಿಸಿವೆ. ರಾಶಿಚಕ್ರವನ್ನು 12 ಕಾಲ್ಪನಿಕ ಖಂಡಗಳಾಗಿ ವಿಭಾಗಿಸಿ ಮೇಷದಿಂದ ಮೀನದವರೆಗೆ (ಪಶ್ಚಿಮ-ಪೂರ್ವ ದಿಶೆಯಲ್ಲಿ) ಅವನ್ನು ಹೆಸರಿಸಿದೆ. ಒಂದೊಂದು ಖಂಡದ (ಅಂದರೆ ರಾಶಿಯ) ವ್ಯಾಪ್ತಿ 300. ರಾಶಿಚಕ್ರದ ಅಗಲ 360. ಇದರ ಸಮದ್ವಿಭಾಜಕವೇ  ಸೂರ್ಯನ ವಾರ್ಷಿಕ ಕಕ್ಷೆ (ಭೂಮಿ ಇಲ್ಲಿಯ ಕೇಂದ್ರ). ಇದರ ಹೆಸರು ಕ್ರಾಂತಿವೃತ್ತ (ಎಕ್ಲಿಪ್ಟಿಕ್). ನಿತ್ಯಸಂಚಾರಿಯಾಗಿರುವ ಸೂರ್ಯನ ತಾತ್ಕಾಲಿಕ ನೆಲೆಯ ಹೆಸರಿನಿಂದ ಆಯಾ ಅವಧಿಯನ್ನು ನಿಗದಿಸಿದೆ. ಉದಾಹರಣೆಗೆ 2005-06ರಲ್ಲಿಯ ಸಂಕ್ರಮಣ ದಿನಾಂಕಗಳಿವು: ಮಕರ ಜನವರಿ 13, ಕುಂಭ ಫೆಬ್ರುವರಿ 12, ಮೀನ ಮಾರ್ಚ್ 14, ಮೇಷ ಏಪ್ರಿಲ್ 13, ವೃಷಭ ಮೇ 14, ಮಿಥುನ ಜೂನ್ 14, ಕರ್ಕಾಟಕ ಜುಲೈ 16, ಸಿಂಹ ಆಗಸ್ಟ್ 16, ಕನ್ಯಾ ಸೆಪ್ಟೆಂಬರ್ 16, ತುಲಾ ಅಕ್ಟೋಬರ್ 17, ವೃಶ್ಚಿಕ ನವೆಂಬರ 16, ಧನು ಡಿಸೆಂಬರ್ 15, ಮಕರ ಜನವರಿ (2006) 14, ಕುಂಭ ಫೆಬ್ರುವರಿ 12, ಮೀನ ಮಾರ್ಚ್ 14 ಇತ್ಯಾದಿ. ಆದ್ದರಿಂದ 2005 ಏಪ್ರಿಲ್ 13 ರಿಂದ ಮೇ 13ರ ತನಕದ ಅವಧಿ ಮೇಷಮಾಸ, ಮೇ 14ರಿಂದ ಜೂನ್ 13ರ ತನಕದ ಅವಧಿ ವೃಷಭ ಮಾಸ ಇತ್ಯಾದಿ. ಇವು ಸೌರಮಾಸಗಳು. ಸುದೀರ್ಘಕಾಲ ಇವು ವೃತ್ಯಯಿಸುವುದಿಲ್ಲ. 

	ಮೇಷ ಸಂಕ್ರಮಣವನ್ನು ಇಂದಿಗೂ ಯುಗಾದಿಯೆಂದು ಆಚರಿಸುತ್ತಿರು ವುದು ಸರಿಯಷ್ಟೆ. ಯುಗಾದಿ ಎಂದರೆ ಕ್ರಾಂತಿವೃತ್ತಸಂಚಾರಿ ಸೂರ್ಯ ವಿಷುವದ್ವøತ್ತವನ್ನು (ನೋಡಿ- ವಿಷುವದ್ವøತ್ತ) ದಕ್ಷಿಣದಿಂದ ಉತ್ತರಕ್ಕೆ ದಾಟುವ ಕ್ಷಣ. ಈ ಬಿಂದುವಿಗೆ ವಸಂತವಿಷುವವೆಂದು (ವರ್ನಲ್ ಈಕ್ವಿನಾಕ್ಸ್) ಹೆಸರು. ಇದರ ನೇರಿದಿರುಬಿಂದುವಿನಲ್ಲಿ (ಭೂಮಿ ಇಲ್ಲಿಯ ಕೇಂದ್ರ) ಸೂರ್ಯ ಉತ್ತರದಿಂದ ದಕ್ಷಿಣಕ್ಕೆ ದಾಟುತ್ತದೆ. ಇದು ಶರದ್ವಿಷುವ (ಆಟಮ್ನಲ್ ಈಕ್ವಿನಾಕ್ಸ್). ಭೂಮಿಯ ಉತ್ತರಗೋಳಾರ್ಧ ನಿವಾಸಿಗಳಾಗಿ ರುವ ನಮಗೆ ವಸಂತವಿಷುವವೇ ಯುಗಾದಿ ಎಂಬ ವಾಸ್ತವ ಸತ್ಯ ರಾಮಾಯಣ ಕಾಲದ (ಕ್ರಿ.ಪೂ.ಸು. 2000 ವರ್ಷ) ಋಷಿಗಳಿಗೂ ತಿಳಿದಿತ್ತು.

	ವಿಷುವದ್ಬಿಂದುಗಳಿಗೆ ಕ್ರಾಂತಿವೃತ್ತದ ಮೇಲೆ ಹಿನ್ಸರಿತವಿದೆ (ಪೂರ್ವ-ಪಶ್ಚಿಮದಿಶೆ). ಇದರ ಕಾರಣವಾಗಿ ರಾಮಾಯಣ ಕಾಲದಲ್ಲಿ ವಂಸತವಿಷುವವು ಕೃತ್ತಿಕೆಯಲ್ಲಿದ್ದುದು 6ನೆಯ ಶತಮಾನದ ವೇಳೆಗೆ ಅಶ್ವಿನೀ ನಕ್ಷತ್ರಕ್ಕೆ ಹಿನ್ಸರಿದಿತ್ತು! ಹಾಗಾದರೆ ಯುಗಾದಿ ಹಬ್ಬದ ಆಚರಣೆ ಎಂದು? ವಾಸ್ತವತೆಗೂ ಆಚರಣೆಗೂ ನಡುವೆ ಲಯ ತಪ್ಪಿತ್ತು. ಇದನ್ನು ಗಮನಿಸಿದ ವರಾಹಮಿಹಿರ (6ನೆಯ ಶತಮಾನ) ಅಶ್ವಿನೀ ನಕ್ಷತ್ರಕ್ಕೆ ಸೂರ್ಯಬಂದಾಗ (ಅಂದರೆ ಮೇಷ ಸಂಕ್ರಮಣದಂದು) ಯುಗಾದಿ ಎಂದು ವಿಧಿಸಿದ. ಇದು ಅಂದಿನ ವಾಸ್ತವತೆಗೆ ಅನುಗುಣವಾಗಿತ್ತು.     

	ವರ್ತಮಾನ ವರ್ಷಗಳಲ್ಲಿ ವಸಂತ ವಿಷುವವು ರೇವತಿ-ಉತ್ತರಾ ಭಾದ್ರಾ ನಕ್ಷತ್ರಗಳ ನಡುವೆ (ಮೀನರಾಶಿ) ನೆಲಸಿದೆ. ಎಂದೇ ಸೂರ್ಯ ಈ ಬಿಂದುವನ್ನು ಪ್ರವೇಶಿಸಿದಂದೇ (ಸ್ಥೂಲವಾಗಿ ಮಾರ್ಚ್ 22) ಆಕಾಶದಲ್ಲಿ ಯುಗಾದಿ ಘಟಿಸುತ್ತದೆ. ಆದರೆ ಆಚರಣೆ ಮಾತ್ರ ಇನ್ನೂ ಮೇಷಸಂಕ್ರಮಣಕ್ಕೇ ಅಂಟಿಕೊಂಡಿರುವುದೊಂದು ವಿಪರ್ಯಾಸ, ಅದೂ ಆಧುನಿಕ ವಿಜ್ಞಾನ ಯುಗದಲ್ಲಿ! 

(ನೋಡಿ- ವಿಷುವದ್ಬಿಂದುಗಳು-ಮತ್ತು-ಅಯನಬಿಂದುಗಳು)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ